ಕನಕಪುರ : ಕರ್ನಾಟಕದ ಹೊಸಜಿಲ್ಲೆ ರಾಮನಗರಕ್ಕೆ ಸೇರಿದ ಒಂದು ಪಟ್ಟಣ. ಇದೇ ಹೆಸರಿನ ತಾಲ್ಲೂಕಿನ ಆಡಳಿತ ಕೇಂದ್ರ. ಹಿಂದೆ ಬೆಂಗಳೂರು ಜಿಲ್ಲೆಗೆ ಸೇರಿತು. 23.08.07ರಿಂದ ರಾಮನಗರ ಜಿಲ್ಲೆಗೆ ಸೇರಿತು. ಉ.ಅ. 12ಂ 33' ಮತ್ತು ಪು.ರೇ. 77ಂ 29' ನಲ್ಲಿ ಅರ್ಕಾವತಿ ನದಿಯ ಬಲದಂಡೆಯ ಮೇಲೆ, ಉತ್ತರ ದಕ್ಷಿಣವಾಗಿ ಹಬ್ಬಿದೆ. ತಾಲ್ಲೂಕಿನ 1606.ಚ.ಕಿ.ಮೀ

ಈ ಪಟ್ಟಣ ಬೆಂಗಳೂರಿನ ದಕ್ಷಿಣಕ್ಕೆ 58 ಕಿಮೀ ದೂರದಲ್ಲಿದೆ. ರಾಮನಗರಂ ರೈಲ್ವೆ ನಿಲ್ದಾಣಕ್ಕೆ ಇಲ್ಲಿಂದ 27 ಕಿಮೀ ಅಂತರವಿದೆ. ಪಟ್ಟಣದ ಜನಸಂಖ್ಯೆ 47,047 (2001). 
1974ರ ವರೆಗೂ ಇದಕ್ಕೆ ಕಾನಕಾನಹಳ್ಳಿ ಎಂಬ ಹೆಸರಿತ್ತು. ಕಾನಕಾನನೆಂಬವ ಇಲ್ಲಿ ಒಂದು ಸಣ್ಣ ಕೋಟೆ ಕಟ್ಟಿಕೊಂಡಿದ್ದರಿಂದ ಇದಕ್ಕೆ ಈ ಹೆಸರು ಬಂತೆಂದು ಹೇಳಲಾಗಿದೆ. ಕಾನಿಕಾರ್ನ ಹಳ್ಳಿ ಎಂಬುದು ಮೂಲನಾಮವೆಂದೂ ಕಾಣಿಕಾರ್ (ನೆಲದೊಡೆಯ) ಎಂಬುದರಿಂದ ಈ ಹೆಸರು ಬಂತೆಂದೂ ಇಲ್ಲಿಯ ಜನ ತಿಳಿದು ಕೊಂಡಿದ್ದಾರೆಂದೂ ಆದರೆ ವಾಸ್ತವವಾಗಿ ಇದು ಕನ್ಯಾ-ಕರ್ಣ (ಭವಾನಿಯ ಕಿವಿ) ಎಂದಿರಬೇಕೆಂದೂ ಬುಕಾನನ್ ಅಭಿಪ್ರಾಯಪಟ್ಟಿದ್ದಾನೆ. 13ನೆಯ ಶತಮಾನದ ಶಾಸನವೊಂದರಲ್ಲಿ ಇದರ ಹೆಸರು ಕಾಣಿಕಾರಹಳ್ಳಿ. ಈಗ ಇದರ ಹೆಸರು ಕನಕಪುರ ಎಂದಿರುವುದರಿಂದ ಹಳೆಯ ಹೆಸರನ್ನು ಕುರಿತ ವಾದ ಅಷ್ಟಾಗಿ ಮುಖ್ಯವಲ್ಲ.

ಕನಕಪುರದಲ್ಲಿರುವ ಕೋಟೆಯನ್ನು ಕಟ್ಟಿಸಿದಾತ ಚನ್ನಪಟ್ಟಣದ ಪಾಳೆಗಾರನಾಗಿದ್ದ ಜಗದೇವರಾಯ ಎಂದು ಹೇಳಲಾಗಿದೆ. ಆತ ಇಲ್ಲಿದ್ದ ಸಣ್ಣ ಕೋಟೆಯ ಸ್ಥಳದಲ್ಲಿ ಇದನ್ನು ಕಟ್ಟಿಸಿದ. 1630ರಲ್ಲಿ ಇದನ್ನು ಮೈಸೂರಿನ ಚಾಮರಾಜ ಗೆದ್ದುಕೊಂಡ. ಇಲ್ಲಿ ಜೀರ್ಣವಾದ ರಂಗನಾಥ ದೇವಾಲಯವಿದೆ. ಶ್ರೀರಂಗಪಟ್ಟಣದ ಕಡೆಗೆ ನುಗ್ಗಿಬರುತ್ತಿದ್ದ ಬ್ರಿಟಿಷ್ ಸೇನೆಗೆ ಠಾವು ದೊರೆಯದಿರಲೆಂಬ ಉದ್ದೇಶದಿಂದ ಟಿಪ್ಪುಸುಲ್ತಾನ ಎರಡು ಸಾರಿ ಈ ಪಟ್ಟಣವನ್ನು ಹಾಳುಗೆಡವಿದ. ಅನಂತರ ಬಹುಕಾಲ ಕೋಟೆಯೊಳಗಡೆಯಲ್ಲಿ ಹುಲಿಯೇ ಮುಂತಾದ ದುಷ್ಟಮೃಗಗಳು ಸೇರಿಕೊಂಡು ಮನುಷ್ಯರನ್ನೂ ದನಕರುಗಳನ್ನೂ ಎತ್ತಿಕೊಂಡು ಹೋಗುತ್ತಿದ್ದುವು.

ಹಸಿರು ಹೊದೆದ ಬೆಟ್ಟಗಳ ನಡುವೆ ಮಲಗಿರುವ ಕನಕಪುರ ಒಂದು ರಮ್ಯಪ್ರದೇಶ. ಅರ್ಕಾವತಿಯ ದಂಡೆಯ ಮೇಲೆ ಹಬ್ಬಿದ ತೆಂಗಿನ ಮರಗಳ ಸಾಲು ಈ ಪಟ್ಟಣಕ್ಕೆ ಹಸುರು ಕುಚ್ಚಿನ ಅಂಚು ಕಟ್ಟಿದಂತಿದೆ. ಶಿವಸಮುದ್ರ ಮತ್ತು ಶಿಂಷಾಗಳಿಂದ ಬರುವ ವಿದ್ಯುತ್ ಕನಕಪುರದಿಂದ ಮುಂದೆ ರಾಮನಗರಂ, ಬೆಂಗಳೂರು, ಕೋಲಾರದ ಚಿನ್ನದ ಗಣಿ ಮುಂತಾದ ಎಡೆಗಳಿಗೆ ಸಾಗುತ್ತದೆ. ರೇಷ್ಮೆ ಬಿತ್ತನೆ ಕೋಠಿಗಳೂ ರೇಷ್ಮೆಗೂಡಿನಿಂದ ನೂಲು ಸುತ್ತುವ ಕಾರ್ಖಾನೆಯೂ (ಫಿಲೇಚರ್ಸ್‌) ಇಲ್ಲುಂಟು. ಶಾಲಾ ಕಾಲೇಜೂ ಇವೆ. ಪ್ರತಿ ಗುರುವಾರವೂ ಇಲ್ಲಿ ನಡೆಯುವ ಸಂತೆ ಸುತ್ತೆಲ್ಲ ಪ್ರಸಿದ್ಧ.

ಕನಕಪುರ ತಾಲ್ಲೂಕು ರಾಮನಗರ ಜಿಲ್ಲೆಯ ಅತ್ಯಂತ ದಕ್ಷಿಣದಲ್ಲಿದೆ. ಎಲೆಯಾಕಾರದ, ಕಾವೇರಿ ಜಲಾನಯನ ಭೂಮಿಯ ಪುರ್ವಭಾಗದಲ್ಲಿರುವ ಈ ತಾಲ್ಲೂಕಿನ ಪುರ್ವದಲ್ಲಿ ತಮಿಳುನಾಡಿನ ಸೇಲಂ ಜಿಲ್ಲೆ, ಈಶಾನ್ಯದಲ್ಲಿ ಆನೆಕಲ್ ತಾಲ್ಲೂಕು, ಉತ್ತರದಲ್ಲಿ ದಕ್ಷಿಣ ಬೆಂಗಳೂರು ತಾಲ್ಲೂಕು, ವಾಯವ್ಯದಲ್ಲಿ ರಾಮನಗರ ತಾಲ್ಲೂಕು, ಪಶ್ಚಿಮದಲ್ಲಿ ಚನ್ನಪಟ್ಟಣ ಮತ್ತು ಮಳವಳ್ಳಿ ತಾಲ್ಲೂಕುಗಳು, ದಕ್ಷಿಣದಲ್ಲಿ ಕಾವೇರಿ ನದಿ, ಅದರ ಬೆನ್ನಿಗೇ ಕೊಳ್ಳೆಗಾಲ ತಾಲ್ಲೂಕು ಇವೆ. ವಿಸ್ತೀರ್ಣ 161,460 ಚ ಕಿಮೀ. ಇದು ಇಡೀ ಜಿಲ್ಲೆಯಲ್ಲೇ ಅತ್ಯಂತ ದೊಡ್ಡ ತಾಲ್ಲೂಕು.
ನೆಲಮಂಗಲದ ಪಶ್ಚಿಮದ ಕಡೆಯಿಂದ ಬರುವ ಶಿಲಾಬೆಟ್ಟಗಳು ಮಾಗಡಿ, ರಾಮನಗರ ತಾಲೂಕುಗಳನ್ನು ಹಾಯ್ದು, ಈ ತಾಲ್ಲೂಕನ್ನು ಉತ್ತರಭಾಗದಿಂದ ಪ್ರವೇಶಿಸಿ, ಪುರ್ವ, ಪಶ್ಚಿಮ ಮತ್ತು ದಕ್ಷಿಣ ಅಂಚಿನಲ್ಲಿ ಕವಚದಂತೆ ಒತ್ತಾಗಿ ಹಬ್ಬಿವೆ. ಉತ್ತರದಿಂದ ದಕ್ಷಿಣದ ಕಾವೇರಿ ಕಣಿವೆಯ ಕಡೆಗೆ ನೆಲ ಇಳಿಜಾರಾಗಿದೆ. ಪಶ್ಚಿಮದಲ್ಲಿ ಬಾಣಂತಿ ಮಾರಿಬೆಟ್ಟ (104 ಕಿಮೀ), ಭೀಮಕಂಡಿ, ಕಡಕಲ್, ಮುದವಾಡ ಮತ್ತು ನರಸಿಂಹದೇವರ ಬೆಟ್ಟಗಳೂ ಆಗ್ನೇಯದಲ್ಲಿ ದೇವರಬೆಟ್ಟ, ಕೊಪ್ಪಬೆಟ್ಟ (860 ಮೀ), ಬರೀಕಲ್ಲು ಬೆಟ್ಟಗಳೂ ಪುರ್ವದಲ್ಲಿ ಬಿಳೀಕಲ್ಲು ಬೆಟ್ಟ, ಗುಲಕಲ್ ಬೆಟ್ಟಗಳೂ ನೈಋತ್ಯದಲ್ಲಿ ಪತ್ರಧಾರಿದೇವ ಇತ್ಯಾದಿ ಬೆಟ್ಟಗಳೂ ಉತ್ತರದಲ್ಲಿ ಗಂಗಾಧರನ ಬೆಟ್ಟವೂ ಇವೆ.
ತಾಲ್ಲೂಕಿನ ನೈಋತ್ಯ ಭಾಗದಲ್ಲಿ ಚಾರ್ನಕೈಟ್ ಶಿಲಾಪದರಗಳಿವೆ. ಉಳಿದ ಕಡೆಗಳಲ್ಲಿರುವುದು ಬೆಣಚುಕಲ್ಲಿನ ಶಿಲೆಗಳು. ರಾಮನಗರದ ಕಣಶಿಲಾ (ಗ್ರಾನೈಟ್) ಸಮುದಾಯ ಕನಕಪುರದಿಂದ ಪ್ರಾರಂಭವಾಗಿ ಉತ್ತರದಲ್ಲಿ ರಾಮನಗರದ ಕಡೆಗೆ ಹರಡಿದೆ. ಈ ಶಿಲೆಗಳದು ಗೋಳಾಕೃತಿ. ಚಾರ್ನಕೈಟ್ನಂತಿರುವ ಡೈಕ್ ಮತ್ತು ಹಾರ್ನ್‌ಬ್ಲೆಂಡ್ ಶಿಲೆಗಳು ಹಾರೋಹಳ್ಳಿಗೆ ವಾಯವ್ಯದಲ್ಲಿವೆ. ಸಾಲಹುಣಿಸೆ ಮತ್ತು ಮರಳವಾಡಿ ಬಳಿ ಪದ್ಮರಾಗ ಶಿಲೆ ಉಂಟು.

ತಾಲ್ಲೂಕಿನ ದಕ್ಷಿಣದಲ್ಲಿ ತ್ರಿಭುಜಾಕೃತಿಯ ಪ್ರದೇಶದಲ್ಲಿರುವುದು ಎರೆಮಣ್ಣು, ಉಳಿದ ಕಡೆಗಳಲ್ಲಿ ಅಗ್ನಿಶಿಲೆಯಿಂದಾದ, ಹಗುರ ರಚನೆಯುಳ್ಳ ಕೆಂಪು ಮಣ್ಣಿದೆ.

ಕಾವೇರಿಯ ಉಪನದಿಯಾದ ಅರ್ಕಾವತಿ ವಾಯವ್ಯದಿಂದ ಪ್ರವೇಶಿಸಿ, ತಾಲ್ಲೂಕಿನ ಮಧ್ಯದಲ್ಲಿ ಉತ್ತರ-ದಕ್ಷಿಣವಾಗಿ ಹರಿದು, ಸಂಗಮದ ಬಳಿ ಕಾವೇರಿಯನ್ನು ಸೇರುತ್ತದೆ. ಅರ್ಕಾವತಿಗೆ ಎರಡೂ ಕಡೆಗಳಿಂದ ಬಂದು ಸೇರುವ ನದಿಗಳೂ ಹೊಳೆಗಳೂ ಅನೇಕ. ವೃಷಭಾವತಿ ನದಿ ಈ ತಾಲ್ಲೂಕನ್ನು ಪ್ರವೇಶಿಸುವಾಗಲೇ ಮುದುವಾಡಿಯ ಬಳಿ ಅರ್ಕಾವತಿಯನ್ನು ಸೇರುತ್ತದೆ. ಈಶಾನ್ಯದ ಕಡೆಯಿಂದ ಹರಿದು ಬರುವ ಅಂತರಗಂಗೆ, ಬಸವನ ಹೊಳೆ, ಕೂಟ್ಲೆ ಹೊಳೆಗಳು ಒಂದುಗೂಡಿ ಅರ್ಕಾವತಿಯನ್ನು ಸೇರುವುದು ಕನಕಪುರದ ಬಳಿ. ಆಗ್ನೇಯ ಎಲ್ಲೆಯವರೆಗೂ ದೊಡ್ಡ ಹೊಳೆ ಹರಿದು ಬಂದು ಸಂಗಮದ ಎದುರು ದಂಡೆಯಲ್ಲಿ ಮಾಹಳ್ಳಿಯ ಬಳಿ ಅರ್ಕಾವತಿಯನ್ನು ಕೂಡಿಕೊಳ್ಳುತ್ತದೆ. ಪಶ್ವಿಮದ ಕಡೆಯಿಂದ ಉಯ್ಯಂ ಬಳ್ಳಿ-ಕಬ್ಬಾಳ ರಸ್ತೆಗೆ ಸಮಾನಾಂತರವಾಗಿ ಹರಿದು ಅರ್ಕಾವತಿಯನ್ನು ಸೇರುವುದೇ ಬಂಡಿಹಳ್ಳ.
ಮೇಯಿಂದ ನವೆಂಬರ್ವರೆಗೆ ನೈಋತ್ಯ ಮಾರುತಗಳಿಂದ ಇಲ್ಲಿ 70-75 ಸೆಂಮೀ ಮಳೆಯಾಗುತ್ತದೆ. (ಕನಕಪುರ 75 ಸೆಂಮೀ, ಕೋಡಿಹಳ್ಳಿ 71 ಸೆಂಮೀ, ಸಾತನೂರು 75 ಸೆಂಮೀ). ಬೆಂಗಳೂರು ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಅತ್ಯಂತ ಹೆಚ್ಚಿನ ಮಳೆ ಆದದ್ದೆಂದರೆ ಕನಕಪುರದಲ್ಲಿ-1897ರ ಸೆಪ್ಟೆಂಬರ್ 22ರಂದು (22.5 ಸೆಂಮೀ).

ಬೆಟ್ಟದ ಕಾಡುಗಳಿಂದ ಕೂಡಿದ ಈ ತಾಲ್ಲೂಕಿನಲ್ಲಿ ಸರ್ಕಾರಸಂರಕ್ಷಿತ ಅರಣ್ಯಗಳು ಅನೇಕ ಉಂಟು. ದಕ್ಷಿಣದಲ್ಲಿ ಚಿಲಂದವಾಡಿ, ಆಗ್ನೇಯದಲ್ಲಿ ಮೂಗೂರು, ಪಶ್ಚಿಮದಲ್ಲಿ ಕಬ್ಬಾಳ. ತಲ್ಲೂರು ಮತ್ತು ಬಾಣಂತಿಮಾರಿ, ಪುರ್ವದಲ್ಲಿ ಬಿಳಿಕೆರೆ ಮತ್ತು ಈಶಾನ್ಯದಲ್ಲಿ ರಾಗಿಹಳ್ಳಿಗಳಲ್ಲಿ ಸಂರಕ್ಷಿತ ಕಾಡುಗಳಿವೆ. ಕನಕಪುರದ ಸುತ್ತಮುತ್ತ ತೇಗ, ಹೊನ್ನೆ, ಬೀಟೆ, ಕಮ್ಮಾರ ಮುಂತಾದ ಮರಗಳುಂಟು. ಶ್ರೀಗಂಧದ ಮರಗಳೂ ತಕ್ಕಮಟ್ಟಿಗೆ ಬೆಳೆಯುತ್ತವೆ.

ಉತ್ತರ ಮತ್ತು ಮಧ್ಯಭಾಗಗಳಲ್ಲಿ ನದಿ-ಹೊಳೆಗಳ ದಡಗಳಲ್ಲಿ ವ್ಯವಸಾಯ ಸಾಧ್ಯ. ಅರ್ಕಾವತಿ ನದೀಬಂiÀÄಲು ಮುಖ್ಯವಾದದ್ದು.ಒಟ್ಟು ಬೇಸಾಯದ ನೆಲ 70,106 ಹೆ. ಜಿಲ್ಲೆಯಲ್ಲಿ ಬೇಸಾಯಕ್ಕೊಳಗಾಗಿರುವ ನೆಲದಲ್ಲಿ 1/6 ಭಾಗ ಇಲ್ಲಿದೆ. ಆಹಾರ ಧಾನ್ಯಗಳನ್ನು ಬೆಳೆಯುವ ಪ್ರದೇಶ 45,622 ಹೆ. (61.72%), ತೋಟಗಾರಿಕೆ ಪ್ರದೇಶ (1,88 ಹೆ (2.54%), ವಾಣಿಜ್ಯ ಬೆಳೆ ಬೆಳೆಯುವ ಪ್ರದೇಶ 25,256 ಹೆ. (34.17%), ನೀರಾವರಿಗೊಳಪಟ್ಟ ಪ್ರದೇಶ 10,828 ಹೆ. (15.45%), ಬತ್ತ, ರಾಗಿ, ಹಿಪ್ಪನೇರಳೆ, ಅವರೆ, ತೆಂಗು, ಹರಳು, ಹುಣಿಸೆ, ಕುಂಬಳಕಾಯಿ ಇತರ ಮುಖ್ಯ ಬೆಳಸುಗಳು. ನೀರಾವರಿ ಅನುಕೂಲವಿದ್ದರೆ ಈ ತಾಲ್ಲೂಕಿನಲ್ಲಿ ಇನ್ನೂ ಹೆಚ್ಚು ಫಸಲು ತೆಗೆಯಬಹುದು. ಕನಕಪುರದ ದಕ್ಷಿಣಕ್ಕೆ 12 ಕಿಮೀ ಮೈಲಿ ದೂರದಲ್ಲಿರುವ 25 ಲಕ್ಷ ರೂ ವೆಚ್ಚದ ಸಾತನೂರು ಯೋಜನೆ ಮಧ್ಯಮ ತರಗತಿಯ ನೀರಾವರಿ ಯೋಜನೆಗಳಲ್ಲೊಂದು. ಇದರ ಆಯಕಟ್ಟಿನಿಂದ 4047 ಹೆ. ನೆಲ ನೀರಾವರಿಗೆ ಒಳಪಡುತ್ತದೆ. ಮೇಕೆದಾಟು ವಿದ್ಯುತ್ ಯೋಜನೆಯೂ ಪರಿಶೀಲನೆ ಯಲ್ಲಿದೆ. ಈ ತಾಲ್ಲೂಕಿನಲ್ಲಿ ನೂರಕ್ಕೂ ಹೆಚ್ಚು ಕೆರೆಗಳಿವೆ. ಇವು ಬಹುತೇಕ ಸಣ್ಣವು.

ತಾಲ್ಲೂಕಿನ ವಾಯವ್ಯ ಭಾಗದಲ್ಲಿ ಪದ್ಮರಾಗವೂ ಹಾರೋಶಿವರದ ಪಶ್ಚಿಮದಲ್ಲಿ ಕಬ್ಬಿಣದ ಅದಿರೂ ದೊರೆಯುತ್ತವೆ.
ರೈಲುಮಾರ್ಗವಿಲ್ಲದ ಈ ತಾಲ್ಲೂಕಿನಲ್ಲಿ ರಸ್ತೆಗಳು ತಕ್ಕಮಟ್ಟಿಗೆ ಅಭಿವೃದ್ಧಿ ಹೊಂದಿವೆಯೆನ್ನಬಹುದು. ಒಟ್ಟು ರಸ್ತೆ ಉದ್ದ 748 ಕಿಮೀ ಸುಧಾರಿತ ರಸ್ತೆಗಳೆ ಹೆಚ್ಚು. ಕನಕಪುರ ಪಟ್ಟಣ ಇವುಗಳ ಕೇಂದ್ರ. ಬೆಂಗಳೂರು-ಮಳವಳ್ಳಿ-ಮೈಸೂರು ರಸ್ತೆ ಇದರ ಮುಖಾಂತರ ಹಾದುಹೋಗುತ್ತದೆ. ಹಲಗೂರು-ಕನಕಪುರ, ಚನ್ನಪಟ್ಟಣ-ಹಸನಹಳ್ಳಿ, ರಾಮನಗರ-ಕನಕಪುರ, ಚನ್ನಪಟ್ಟಣ-ಕನಕಪುರ ಇವು ಇತರ ರಸ್ತೆಗಳು. ಸು. 7291 ಟೆಲಿಪೋನ್ ಸಂಪರ್ಕ ಹಾಗೂ 58 ಅಂಚೆ ಕಛೇರಿಗಳಿವೆ.

ಹಾರೋಹಳ್ಳಿ, ಕನಕಪುರ, ಮರಳವಾಡಿ, ಕೋಡಿಹಳ್ಳಿ, ಸಾತನೂರು, ಉಯ್ಯಂಬಳ್ಳಿ-ಇವು ಈ ತಾಲ್ಲೂಕಿನ ಹೋಬಳಿಗಳು. ಒಟ್ಟು ಹಳ್ಳಿಗಳ ಸಂಖ್ಯೆ 229, ಜನಸಂಖ್ಯೆ 1951ರಲ್ಲಿ 1,68,789 ಇದ್ದುದು 1961ರಲ್ಲಿ 1,98,053 ಆಯಿತು. ತಾಲ್ಲೂಕಿನ ಜನಸಂಖ್ಯೆ 3,37,208 (2001). ಸರಾಸರಿ ಸಾಕ್ಷರತೆ ಶೇ. 50, ನಗರ ಜನಸಂಖ್ಯೆ : 47,060.	(ಕೆ.ಆರ್.ಆರ್. )

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ